ಕೋಲ್, ಜಾರ್ಜ್ ಡಗ್ಲಸ್ ಹೌವರ್ಡ್
1889-1959. ಇಂಗ್ಲಿಷ್ ಇತಿಹಾಸಕಾರ, ಅರ್ಥಶಾಸ್ತ್ರಜ್ಞ, ಸಮಾಜಶಾಸ್ತ್ರಜ್ಞ, ಕಾದಂಬರಿಕಾರ. ಪಶ್ಚಿಮ ಲಂಡನಿನ ಈಲಿಂಗಿನಲ್ಲಿ ಹುಟ್ಟಿದ. ಸೇಂಟ್ ಪಾಲ್ಸ್ ಶಾಲೆ ಮತ್ತು ಆಕ್ಸ್‍ಫರ್ಡ್‍ಗಳಲ್ಲಿ ಶಿಕ್ಷಣ ಪಡೆದ. ಇವನ ವಿದ್ಯಾರ್ಥಿಜೀವನ ಪ್ರತಿಭಾನ್ವಿತವಾದ್ದು. ಆಕ್ಸ್‍ಫರ್ಡಿನಲ್ಲಿ ಈತ ಅಭಿಜಾತಸಾಹಿತ್ಯದ ಅಭ್ಯಾಸಿಯೆಂದೂ ಕವಿಯೆಂದೂ ಸಮಾಜ ವಿಚಾರಗಳನ್ನು ಕುರಿತು ಆಳವಾಗಿ ಆಲೋಚನೆ ಹರಿಸಿರುವವನೆಂದೂ ಹೆಸರು ಗಳಿಸಿದ್ದ. ಕೋಲ್ ಆಕ್ಸ್‍ಫರ್ಡಿನ ಮ್ಯಾಗ್ಡಲೀನ್ ಕಾಲೇಜಿನ ಫೆಲೊ ಆದದ್ದು 1912ರಲ್ಲಿ. ಅನಂತರ ಅನುಕ್ರಮವಾಗಿ ಯೂನಿವರ್ಸಿಟಿ ಕಾಲೇಜ್, ಆಲ್ ಸೋಲ್ಸ್ ಮತ್ತು ನಫೀಲ್ಡ್‍ಗಳಲ್ಲಿ ಫೆಲೊ ಆದನಲ್ಲದೆ ಅರ್ಥಶಾಸ್ತ್ರದ ಪ್ರವಾಚಕನಾದ. ತದನಂತರ ಅವನಿಗೆ ಸಾಮಾಜಿಕ; ಮತ್ತು ರಾಜಕೀಯ ಸಿದ್ಧಾಂತದ ಪ್ರಾಧ್ಯಾಪಕ ಹುದ್ದೆ ಲಭ್ಯವಾಯಿತು. ಅವನ ವಿದ್ವತ್ ಜೀವನವೆಲ್ಲ ಆಕ್ಸ್‍ಫರ್ಡ್ ಲಂಡನ್‍ಗಳಲ್ಲೇ ಕಳೆಯಿತು. ಅನುಕ್ರಮವಾಗಿ ಬಂದ ಅನೇಕ ತಲೆಮಾರುಗಳ ವಿದ್ಯಾರ್ಥಿಗಳ ಮೇಲೆ ಕೋಲ್ ಬೀರಿದ ಪ್ರಭಾವ ಅಗಾಧ. ಅನೇಕ ಉದಿತೋದಿತ ರಾಷ್ಟ್ರಗಳ ಬಹಳ ಮಂದಿ ನಾಯಕರು ಕೋಲ್ ಅಥವಾ ಹೆರಾಲ್ಡ್ ಜೆ. ಲಾಸ್ಕಿಯ ಸಿದ್ಧಾಂತಗಳಿಂದ ತಲೆ ಕೆಡಿಸಿಕೊಂಡಿದ್ದಾರೆಂದು ಇಂಗ್ಲೆಂಡಿನ ಪತ್ರಿಕೆಯೊಂದು ಒಮ್ಮೆ ಆತನ ಬಗ್ಗೆ ಕೋಪದಿಂದ ಉತ್ಪ್ರೇಕ್ಷೆ ಮಾಡಿ ಬರೆದಿತ್ತು.										(ಎಂ.ಕೆ.ಆರ್.; ಎಚ್.ವಿ.ಎಸ್.)

ಕೋಲ್ ಅತ್ಯಂತ ಕ್ರಿಯಾಶೀಲ ಸಮಾಜವಾದಿಯಾಗಿದ್ದ. ಫೇಬಿಯನ್ ಸಂಘದ ಅಧ್ಯಕ್ಷನೂ ಆಗಿದ್ದ. ಅವನು ವಿವಾಹವಾದ್ದು 1918ರಲ್ಲಿ. ಅವನ ಪತ್ನಿ ಮಾರ್ಗರೆಟ್ ಇಸಬೆಲ್. ಆಕೆ ಪ್ರಾಧ್ಯಾಪಕನೊಬ್ಬನ ಮಗಳು. ಆಕೆಯೂ ಸ್ವಲ್ಪ ಕಾಲ ಉಪಾಧ್ಯಾಯಿನಿಯಾಗಿದ್ದಳು. ಕೋಲನ ಬರವಣಿಗೆಯಲ್ಲಿ ಅವನೊಂದಿಗೆ ಸಹವರ್ತಿಸಿದಳು.

ಕೋಲನ ಪ್ರಥಮ ಕೃತಿಯ ಹೆಸರು ದಿ ವಲ್ರ್ಡ್ ಆಫ್ ಲೇಬರ್ (1913). ಹೊಸ ಬಗೆಯ ಸಮಾಜವಾದದ ಮುನ್ಸೂಚನೆ ಈ ಗ್ರಂಥದಲ್ಲಿ ಕಾಣಬರುತ್ತದೆ. ವಿಶ್ವವ್ಯಾಪಿ ಕಾರ್ಮಿಕ ಆಂದೋಲನದ ಸಮಗ್ರ ಅಧ್ಯಯನ ಇಲ್ಲಿದೆ. ಆ ಕಾಲದಲ್ಲಿ ಪ್ರಚಲಿತವಾಗಿದ್ದ ಎರಡು ಕ್ರಾಂತಿಕಾರಿ ಸಿದ್ಧಾಂತಗಳಾದ ಕೈಗಾರಿಕಾ ಸಂಘವಾದ (ಸಿಂಡಿಕಲಿಸಂ) ಮತ್ತು ಸಂಸದೀಯ ಅಥವಾ ರಾಜ್ಯ ಸಮಾಜವಾದ-ಇವೆರಡರ ಸಮನ್ವಯ ಸೂತ್ರಗಳನ್ನು ಕೋಲ್ ಈ ಪುಸ್ತಕದಲ್ಲಿ ನೀಡಿದ್ದಾನೆ. ಮುಖ್ಯ ಕೈಗಾರಿಕೆಗಳು ರಾಷ್ಟ್ರದ ಒಡೆತನಕ್ಕೆ ಬರಬೇಕು, ಅವು ಕಾರ್ಮಿಕ ಸಂಘಗಳ ಪ್ರಜಾಸತ್ತಾತ್ಮಕ ನಿಯಂತ್ರಣಕ್ಕೆ ಒಳಪಡಬೇಕು-ಎಂಬ ತತ್ತ್ವವನ್ನು ಈತ ಇತರರೊಂದಿಗೆ ಸೇರಿ ಪ್ರತಿಪಾದಿಸಿದ. ಇದಕ್ಕೆ ಗಿಲ್ಡ್ ಸಮಾಜವಾದವೆಂದು ಹೆಸರು. ಮಧ್ಯಯುಗದ ಗಿಲ್ಡ್‍ಗಳ ನೆನಪು ತರುವಂತೆ ಉದ್ದೇಶಪೂರ್ವಕವಾಗಿ ಇದಕ್ಕೆ ಈ ಹೆಸರು ನೀಡಲಾಯಿತು. ಇದಕ್ಕೆ ಸ್ಫೂರ್ತಿ ಬಂದದ್ದು ಕಾರ್ಲ್ ಮಾಕ್ರ್ಸನಿಗಿಂತ ಅಧಿಕವಾಗಿ ವಿಲಿಯಂ ಮಾರಿಸನಿಂದ. ರಷ್ಯದ ಕ್ರಾಂತಿಯಿಂದಾಗಿ ಗಿಲ್ಡ್ ಸಮಾಜವಾದದ ಚಳವಳಿಗೆ ಬಲವಾದ ಆಘಾತ ಬಿತ್ತು. ಆದರೂ ಅದರ ಪ್ರಭಾವ ಪರಿಣಾಮಕಾರಿಯಾದ್ದಾಗಿತ್ತು. ಅದು ಜೀವಂತ ವಿಚಾರವಾಗಿ ಉಳಿಯಲು ಕೋಲ್ ಮುಖ್ಯ ಕಾರಣ. ಅದನ್ನು ಪ್ರತಿಪಾದಿಸಿ ಆತ ಅನೇಕ ಗ್ರಂಥಗಳನ್ನು ಬರೆದ. ಸೆಲ್ಫ್ ಗವರ್ನ್‍ಮೆಂಟ್ ಇನ್ ಇಂಡಸ್ಟ್ರಿ (1917) ಎಂಬುದು ಈ ವಿಚಾರವನ್ನು ಕುರಿತ ಮೊದಲ ಹಾಗೂ ಅತ್ಯಂತ ಪ್ರಭಾವಪೂರ್ಣ ಗ್ರಂಥ.

ಒಂದನೆಯ ಮಹಾಯುದ್ಧದ ಅನಂತರ ಕೋಲ್ ಪ್ರಭಾವಶಾಲಿ ಅಧ್ಯಾಪಕನೆಂದೂ ರಾಜಕೀಯ ತತ್ತ್ವಜ್ಞನೆಂದೂ ಬಹುಶ್ರುತನೆಂದೂ ಹೆಸರು ಗಳಿಸಿದ. ಕಾರ್ಮಿಕರೂ ಕ್ರಾಂತಿವಾದಿಗಳೂ ಅವನ ಸಲಹೆ ಪಡೆಯುತ್ತಿದ್ದರು. ಆದರೆ ನೇರ ರಾಜಕೀಯದಲ್ಲಿ ಅವನು ಅಷ್ಟೇನೂ ಯಶಸ್ಸು ಗಳಿಸಲಿಲ್ಲ. ಅನೇಕ ಸಮಿತಿ, ಶಾಲೆ, ಸಂಘ, ಪತ್ರಿಕೆ ಮುಂತಾದುವುಗಳನ್ನು ಸ್ಥಾಪಿಸುವುದರಲ್ಲಿ ಅವನು ಸರ್ವದಾ ಆಸಕ್ತನಾಗಿದ್ದ. ಆದರೆ ಯಾವುದಕ್ಕೂ ಅವನು ದೀರ್ಘಕಾಲ ಅಂಟಿಕೊಳ್ಳುತ್ತಿರಲಿಲ್ಲ. ಜಗಳ ಮಾಡಿಕೊಂಡು ಬಿಟ್ಟು ಹೊರಡುತ್ತಿದ್ದ.

ಕೋಲ್ ಬರೆದ ಲೇಖನಗಳ, ಹೊತ್ತಗೆಗಳ ಮತ್ತು ಗ್ರಂಥಗಳ ರಾಶಿ ಅಗಾಧ. ಅವುಗಳ ಸಮಗ್ರ ಪಟ್ಟಿ ಮಾಡುವುದು ಅಸಾಧ್ಯ. ದಿನಕ್ಕೆ ಮೂರು ಸಾವಿರ ಶಬ್ದಗಳಷ್ಟು ಸಾಹಿತ್ಯವನ್ನು ಲೀಲಾಜಾಲವಾಗಿ ಸೃಷ್ಟಿ ಮಾಡಬಲ್ಲೆನೆಂದು ಒಮ್ಮೆ ಅವನು ಹೇಳಿಕೊಂಡಿದ್ದ. ಅವನ ಕೃತಿರಾಶಿಯನ್ನೆಲ್ಲ ಸ್ಥೂಲವಾಗಿ ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಆರ್ಥಿಕ ರಾಜಕೀಯ ವಿಚಾರಗಳನ್ನು ಕುರಿತ ವಸ್ತುನಿಷ್ಠ ಸಮೀಕ್ಷೆಗಳನ್ನೊಳಗೊಂಡ ಪುಸ್ತಕಗಳು ಒಂದು ಬಗೆ. ಅವು ಸುದೀರ್ಘವಾಗಿಯೂ ಸ್ಪಷ್ಟವಾಗಿಯೂ ಸರಳವಾಗಿಯೂ ಇವೆ. ಅವನ್ನು ಬರೆದ ಕಾಲದಲ್ಲಿ ಅವು ಬಹಳ ಉಪಯುಕ್ತ ಪರಾಮರ್ಶನ ಗ್ರಂಥಗಳಾಗಿದ್ದುವು. ಆದರೆ ಕಾಲಕ್ರಮದಲ್ಲಿ ಅವು ಹಳತಾದುವು. ದಿ ಇಂಟೆಲಿಜೆಂಟ್ ಮ್ಯಾನ್ಸ್ ಗೈಡ್ ತೂ ವಲ್ರ್ಡ್ ಕೇಯಾಸ್ (1932), ದಿ ಇಂಟಲಿಜೆಂಟ್ ಮ್ಯಾನ್ಸ್ ರಿವ್ಯೂ ಆಫ್ ಯೂರೋಪ್ ಟುಡೇ (1933), ದಿ ಇಂಟೆಲಿಜೆಂಟ್ ಮ್ಯಾನ್ಸ್ ಗೈಡ್ ಟು ದಿ ಪೋಸ್ಟ್-ವಾರ್ ವಲ್ರ್ಡ್ (1947)-ಇವು ತತ್ಕಾಲೀನ ವಿದ್ಯಮಾನಗಳನ್ನು ಕುರಿತ ವಿಶ್ವಕೋಶಸದೃಶವಾದ ಗ್ರಂಥಗಳು. ದಿ ಕಂಡಿಷನ್ ಆಫ್ ಬ್ರಿಟನ್ (1937) ಮತ್ತು ಲೋಕಲ್ ಅಂಡ್ ರೀಜನಲ್ ಗವರ್ನ್‍ಮೆಂಟ್ (1947)-ಇವೂ ಉಲ್ಲೇಖಾರ್ಹವಾದ ಗ್ರಂಥಗಳು. ಈ ಗ್ರಂಥಗಳ ರಚನೆಯಲ್ಲಿ ಕೋಲನ ಹೆಂಡತಿಯೂ ಬಹಳ ಮಟ್ಟಿಗೆ ಸಹಕಾರ ನೀಡಿದಳು. ಕೋಲ್ ಬರೆದ ಗಿಲ್ಡ್ ಸಮಾಜವಾದಿ ಪುಸ್ತಕಗಳೂ ಇತರ ಆರ್ಥಿಕ ಸಿದ್ಧಾಂತಗಳನ್ನು ಕುರಿತ ಪುಸ್ತಕಗಳೂ ಎರಡನೆಯ ಗುಂಪಿಗೆ ಸೇರುತ್ತವೆ. ಇವುಗಳಲ್ಲಿ ಗೋಲ್ಡ್ ಕ್ರೆಡಿಟ್ ಅಂಡ್ ಎಂಪ್ಲಾಯ್‍ಮೆಂಟ್ (1930), ಹ್ವಾಟ್ ಮಾಕ್ರ್ಸ ರಿಯಲಿಮೆಂಟ್ (1934), ಪ್ರಿನ್ಸಿಪಲ್ಸ್ ಆಫ್ ಎಕನಾಮಿಕ್ ಪ್ಲಾನಿಂಗ್ (1935), ಮನಿ; ಇಟ್ಸ್ ಪ್ರೆಸೆಂಟ್ ಅಂಡ್ ಫ್ಯೂಚರ್ (1944)-ಇವು ಮುಖ್ಯವಾದವು. ಇತಿಹಾಸ ವಿಚಾರಗಳನ್ನು ಕುರಿತು ಕೋಲ್ ಬರೆದ ಪುಸ್ತಕಗಳದು ಮೂರನೆಯ ಗುಂಪು. ಕಾಲದಿಂದ ಹಳತಾಗಿಲ್ಲದ ಪುಸ್ತಕಗಳಿವು. ಲೈಫ್ ಆಫ್ ವಿಲಿಯಂ ಕಾಬೆಟ್ (1924) (ನೋಡಿ- ಕಾಬಟ್,-ವಿಲಿಯಂ). ಲೈಫ್ ಆಫ್ ರಾಬರ್ಟ್ ಓವೆನ್ (1925) (ನೋಡಿ- ಓವೆನ್,-ರಾಬರ್ಟ್), ಇವು ಬಹಳ ಪ್ರಸಿದ್ಧವಾಗಿವೆ ಲೈಫ್ ಆಫ್ ಸ್ಯಾಮ್ಯುಯೆಲ್ ಬಟ್ಲರ್ (1947) (ನೋಡಿ- ಯೇಟ್ಸ್,-ವಿಲಿಯಮ್-ಬಟ್ಲರ್) ಈ ಬಗೆಯ ಇನ್ನೊಂದು ಪುಸ್ತಕ. ಎ ಷಾರ್ಟ್ ಹಿಸ್ಟೊರಿ ಆಫ್ ದಿ ಬ್ರಿಟಿಷ್ ವರ್ಕಿಂಗ್-ಕ್ಲಾಸ್ ಮೂವ್‍ಮೆಂಟ್ (1925-1927) ಮತ್ತು ಎ ಸೆಂಚುರಿ ಆಫ್ ಕೋ-ಆಪರೇಷನ್ (1945). ಇವು ಆಯಾ ಕ್ಷೇತ್ರಗಳಲ್ಲಿ ಅಭಿಜಾತ ಕೃತಿಗಳಾಗಿವೆ. ಈ ಗುಂಪಿನ ಅತ್ಯಂತ ಜನಪ್ರಿಯ ಪುಸ್ತಕವೆಂದರೆ ದಿ ಕಾಮನ್ ಪೀಪಲ್, 1746-1946 (1938). ಕೋಲ್ ಇದನ್ನು ರೇಮಂಡ್ ಪೋಸ್ಟೆಗೇಟನೊಂದಿಗೆ ಸೇರಿ ಬರೆದ. ಕೋಲನ ಹೆಸರನ್ನು ಚಿರಸ್ಥಾಯಿಯಾಗಿ ಮಾಡಿರುವ ಗ್ರಂಥವೆಂದರೆ ಹಿಸ್ಟೊರಿ ಆಫ್ ಸೋಷಿಯಲಿಸ್ಟ್ ಥಾಟ್ (1953-1960). ಐದು ಸಂಪುಟಗಳ ಈ ಗ್ರಂಥದಲ್ಲಿ ಕೋಲ್ ಸಮಾಜವಾದ ಚಿಂತನೆಯ ಸಮಗ್ರ ಇತಿಹಾಸವನ್ನು ಶಾಸ್ತ್ರೀಯವಾಗಿ ಬಿತ್ತರಿಸಿದ್ದಾನೆ. ಆಧುನಿಕ ಸಮಾಜ ದರ್ಶನವನ್ನಾಗಲಿ ಜನತಾ ಚಳವಳಿಗಳನ್ನಾಗಲಿ ಅಭ್ಯಾಸ ಮಾಡಬಯಸುವ ಯಾರೂ ಈ ಗ್ರಂಥವನ್ನು ಬಿಡುವಂತಿಲ್ಲ. ಈ ವಿಚಾರವನ್ನು ಕುರಿತು ಇಷ್ಟೊಂದು ಅಧಿಕಾರಯುತವಾದ ಗ್ರಂಥ ಅದುವರೆಗೂ ಬಂದಿರಲಿಲ್ಲ. ಈ ಗ್ರಂಥದ ನಾಲ್ಕು ಸಂಪುಟಗಳು ಕೋಲ್ ತೀರಿಕೊಂಡಾಗ (1959) ಪ್ರಕಟವಾದುವು. ಐದನೆಯ ಸಂಪುಟವನ್ನು ಅವನ ಪತ್ನಿ ಪೂರೈಸಿದಳು.

1923 ರಿಂದ 1945ರ ವರೆಗೆ ಕೋಲ್ ತನ್ನ ಪತ್ನಿಯೊಡಗೂಡಿ ಸುಮಾರು ಇಪ್ಪತ್ತು ಪತ್ತೆದಾರಿ ಕಾದಂಬರಿಗಳನ್ನು ಬರೆದ. ಬ್ರೂಕ್‍ಲಿನ್ ಮರ್ಡರ್ಸ್ (1923) ದಿ ಡೆತ್ ಆಫ್ ಎ ಮಿಲಿಯನೇರ್ (1925), ಪಾಯಿಸನ್ ಇನ್ ದಿ ಗಾರ್ಡನ್ ಸಬರ್ಬ್ (1929), ಬಗ್ರ್ಲರ್ಸ್ ಇನ್ ಬಕ್ಸ್ (1930), ಡೆಡ್ ಮ್ಯಾನ್ಸ್ ವಾಚ್ (1932), ಡೆತ್ ಇನ್ ದಿ ಕ್ವಾರಿ (1934), ನೈಫ್ ಇನ್ ದಿ ಡಾರ್ಕ್ (1942), ಟಾಯ್ಸ್ ಆಫ್ ಡೆತ್ (1948)-ಇವು ಮುಖ್ಯವಾದವು.					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ